Satish B. SettyArchiveAboutRSS Feed

ಭೀಮನ ಪರಾಕ್ರಮ — ಕುಮಾರವ್ಯಾಸ ಭಾರತ

Happy Independence Day ! ಸ್ವಾತಂತ್ರ್ಯೋತ್ಸವದ ಶುಭಾಶಯಗಳು !

An episode about how Kauravas and Pandavas were growing up by playing pranks on each other during their childhood. Source: Karnataka Mahabharata of Mahakavi Kumaravyasa, edited by V. Syamacharya, published by the Maharaja of Mysore, 1912.

ನಾನು ಪ್ರೌಢಶಾಲೆಯಲ್ಲಿ ಓದೌತ್ತಿದ್ದಾಗ ಕನ್ನಡಕಾವ್ಯದಲ್ಲಿ ಬಹಳ ಆಸಕ್ತನಾದೆನು. ಕನ್ನಡ ಪದ್ಯಗಳೆಂದರೆ ಪಂಚಪ್ರಾಣ. ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ ಅಚ್ಚುಮೆಚ್ಚು. ಈ ಮಹಾಕಾವ್ಯದಲ್ಲಿ ಕೌರವ-ಪಾಂಡವರು ಹೇಗೆ ಬೆಳೆದರು ಎಂಬುದನ್ನು ಕವಿಯು ಅದ್ಭುತವಾಗಿ ವರ್ಣಿಸಿದ್ದಾನೆ. ಬಹಳ ಸಮಯದ ನಂತರ ಗದುಗಿನಭಾರತವನ್ನು ಭಾರತ ಸರ್ಕಾರದ ಅಂಕೀಯ ತಂತ್ರಜ್ಞಾನಾಲಯ-ದಲ್ಲಿ ಸಿಗಿವಂತಾಯಿತು. ಶಾಲೆಯಲ್ಲಿ ಓದಿದ ಪದ್ಯಗಳ ನೆನಪುಗಳು ಪುನರುಜ್ಜೀವಗೊಂಡವು. ಹುಡುಕಿ ಹುಡುಕಿ ೧೭-ನೇ ಸಂಧಿಯಲ್ಲಿ ಆ ಷಟ್ಪದಿಯನ್ನು ಕಂಡೆ. ಭಾಮಿನೀ ಷಟ್ಪದಿಯ ಮನೋಜ್ಞ ಪದ್ಯ.

(ವಿ.ಸೂ: ‘ಱ’-ಕಾರವನ್ನು ‘ರ’ ಎಂದೂ ‘ೞ’-ಕಾರವನ್ನು ‘ಳ’ ಎಂದೂ ಉಚ್ಛರಿಸಿ.)

ಕೇಳು ಜನಮೇಜಯ ಮಹೇಶ್ವರ
ಬಾಲಕರು ನೂಱಾಱು ಮೆಱೆದರು
ಬಾಲಕೇಳೀವ್ಯಸನಿಗಳು ಹೊಱವಳಯದಲಿ ಪುರದ ।
ಆಳಿನೇಱಿಕೆ ಹಿಡಿಗವಡೆ ಗುಱಿ
ಯಾಳು ಚಂಡಿನ ಹೊಣಕೆ ಚಿಣಿಕೋ
ಲಾಳು ಚಿನಿವೆಂಡಿನಲಿ ದಂಡೆಯ ಹಾಱುಗುಪ್ಪೆಗಳ ॥

ಇದರೊಳೊಬ್ಬನೆ ಭೀಮನನಿಬರ
ಸೆದೆವ ತಾ ಸೋತೊಡೆ ವಿಭಾಡಿಸಿ
ಕೆದಱುವನು ಗೆದ್ದೋಡಿದರೆ ಬೆಂಬತ್ತಿ ಹಿಡಿದೆಳೆದು ।
ಸದೆದು ಬಿಡುವನು ಮುನ್ನ ಭೀಷಂ
ಗೊದಱಿ ದೂಱುವನಿವನು ಮಗುೞೊಂ
ದೊದಗಿ ಸಂಗಡವಿಹರು ತಾವೊಂದಾಗಿ ಮಱುಕೊಳಿಸಿ ॥

ಒಂದುದಿನ ವರಭೀಮಸೇನನು
ಮಂದಮತಿಗಳ ಭವನದಲ್ಲಿಗೆ
ಬಂದು ಕರೆವನು ಕೌರವೇಂದ್ರನ ಸಹಿತಶತಕವನು ।
ಇಂದು ನಿಮ್ಮನು ಗುದ್ದಿದೊಡೆ ಗೋ
ವಿಮ್ದನಂಘ್ರಿಗಳಾಣೆ ಯೆನಲಿಕೆ
ಬಂದರೈ ನೋಱೊಂದುಮಾನಿಸರರಕೇಳೆಂದ ॥

ಮುಳ್ಳುಮೊನೆಯಲಿ ಚಿಗುರಿ ನೆತ್ತರ
ಚೆಲ್ಲಿ ಹುಡಿಯಲಿ ಹೊರಳಿ ತಾ ಬಂ
ದಲ್ಲಿ ಧೃತರಾಷ್ಟ್ರಂಗೆ ಭೀಷ್ಮಂಗಳುತ ದೂಱುವನು ।
ಒಲ್ಲೆನೆಂದೊಡೆ ನಮ್ಮ ಕರೆವರು
ಖುಲ್ಲರೆಲ್ಲರು ನಿಮ್ಮ ಮಕ್ಕಳ
ದೆಲ್ಲರಿಗೆ ನಾನೊಬ್ಬನಾಪೆನೆ ಯೆಂದನನಿಲಜನು ॥

ಒಂದುದಿನ ನೂಱಾಱುಮಂದಿಯು
ಬಂದು ಮಳೆಯಲಿ ಪುರದ ಹೊಱಗಿಹ
ದೊಂದು ಠಾವು ಪ್ರಮಾಣವೃಕ್ಷವ ಕಂಡು ನಡೆತರಲು ।
ಬಂದು ತಾವಡರಿದುದು ಕೌರವ
ವೃಂದ ಮರನನು ಬೞಿಕ ನಾಲ್ವರು
ವೊಂದುವೃಕ್ಷದಲಿರಲು ತಾ ಹರಿದಾಡಿದನು ಭೀಮ ॥

ಮರನ ಹಿಡಿದಲುಗಿದೊಡೆ ಬಿದ್ದರು
ಭರತಕುಲಪಾಲಕರು ನೂರ್ವಱು
ವರಮಹಾವಾತದಲಿ ತರುಫಲನಿಕರ ಬೀೞ್ವಂತೆ ।
ಶಿರವೊಡೆದು ಯೆದೆನೊಂದು ಮೊಳಕಾ
ಲ್ಮುಱಿದು ಕೈಗಳು ಮುಱಿದು ನೆತ್ತರು
ಸುಱಿದು ಧೃತರಾಷ್ಟ್ರಂಗೆ ತೋಱಿದರಳುತ ಘಾಯವನು ॥

ಭೀಮನು ಮರವನ್ನು ಹಿಡಿದು ಅಲುಗಾಡಿಸಿದನು. ದೊಡ್ಡ ತೂಫಾನಿನಲ್ಲಿ ಗಿಡಮರಹಣ್ಣುಗಳು ಕೆಳಬೀಳುವಂತೆ ಬಿದ್ದರು ಭರತಕುಲಪಾಲಕರಾದ ನೂರು ಕೌರವರು. ತಲೆ ಹೊಡೆದು, ಬೆನ್ನು ಮುರುದು, ಕೈ-ಮೊಣಕಾಲುಗಳು ಮುರಿದು, ಎದೆ ನೊಂದರು. ರಕ್ತ ಸುರಿಸುಕೊಂಡು ಅಳುತ್ತಾ ಧೃತರಾಷ್ಟ್ರನಿಗೆ ದೂರು ಹೇಳುತ್ತಾ ಗಾಯಗಳನ್ನು ತೋರಿಸಿದರು.