In what language did Rama and Hanuman speak?
The famous Kannada poet DVG writes in the Preface to a book Valmiki Ramayana in Kannada. This is from the Volume 3, Kishkindha Kanda about the logic of argument about “What language did Rama and Anjaneya speak?”.
ಅಸಂಗತ ತರ್ಕ
ಕೆಲವು ವರ್ಷಗಳ ಕೆಳಗೆ ಒಬ್ಬ ಸ್ನೇಹಿತರಿಗೂ ನನಗೂ ನಡೆದ ಒಂದು ಚರ್ಚೆಯ ಭಾಗವನ್ನು ಇಲ್ಲಿ ಉದಾಹರಿಸುತ್ತೇನೆ.
ಪ್ರಶ್ನೆ: ರಾಮನೂ ಆಂಜನೇಯನೂ ಮಾತನಾಡಿದರಂತಲ್ಲ, ಅದು ಯಾವ ಭಾಷೆಯಲ್ಲಿ ?
ಉತ್ತರ: ಕನ್ನಡದಲ್ಲಿ.
ಪ್ರ: ನೀವು ಹಾಗೆ ಹೇಳಲು ಏನು ಆಧಾರ ?
ಉ: ರಾಮಾಯಣ ಗ್ರಂಥವೇ ಆಧಾರ. ಅದರಲ್ಲಿ ಹೇಳಿದೆ, ರಾಮ ಆಂಜನೇಯರು ಸೇರಿದುದು ಕಿಷ್ಕಿಂಧೆಯಲ್ಲಿ
ಎಂದು. ಕಿಷ್ಕಿಂಧೆಯಿರುವುದು ಕನ್ನಡದೇಶದಲ್ಲಿ ಆದುದರಿಂದ ಅವರು ಕನ್ನಡದಲ್ಲೇ ಮಾತನಾಡಿರಬೇಕು.
ಪ್ರ: ಹಾಗಾದರೆ ರಾಮನಿಗೆ ಕನ್ನಡ ಬರುತ್ತಿತ್ತು ಎನ್ನುತ್ತೀರಾ ?
ಉ: ಹಾಗೆನ್ನುತ್ತೇನೆ.
ಪ್ರ: ಅಲ್ಲ ಸ್ವಾಮೀ, ರಾಮ ಹುಟ್ಟಿದ್ದು ಅಯೋಧ್ಯೆಯಲ್ಲಿ. ಅಲ್ಲಿ ಕನ್ನಡ ಇತ್ತೆ ?
ಉ: ಅಯೊಧ್ಯೆಯಲ್ಲಿ ಕನ್ನಡ ಇಲ್ಲದಿದ್ದರೂ ರಾಮನು ಕನ್ನಡ ಕಲಿತುಕೊಂಡಿರಬೇಕು. ನಿಮ್ಮ ಅಭಿಪ್ರಾಯ ?
ಪ್ರ: ರಾಮನಿಗೆ ಸಂಸ್ಕೃತ ಬರುತ್ತಿತ್ತೆಂದು ಊಹಿಸುವುದು ಯುಕ್ತವಾಗಿದೆ. ಅವರಿಬ್ಬರಿಗೂ ಸಂಸ್ಕೃತದಲ್ಲಿಯೇ ಮಾತನಾಡಿದರೆಂದು
ಹೇಳುವುದಾದರೆ, ಆಂಜನೇಯನಿಗೆ ಸಂಸ್ಕೃತ ಬರುತ್ತಿತ್ತೆಂದು ಹೇಳಬೇಕಾಗುತ್ತದಲ್ಲ ?
ಉ: ಹಾಗೆಯೇ ಹೇಳೋಣ. ಆಂಜನೇಯನಿಗೆ ಸಂಸ್ಕೃತ ಬರುತ್ತಿತ್ತೆನ್ನಲು ನಾನು ಯಾವಾಗಲೂ ಸಿದ್ಧನಾಗಿದ್ದೇನೆ !
ಪ್ರ: ಏನು ಸ್ವಾಮಿ, ಇದು ಹೇಗೆ ಹೊಂದಾವಣೆಯಾಗುತ್ತದೆ ? ರಾಮನಿಗೆ ಸಂಸ್ಕೃತ ಬರುತ್ತಿರಬಹುದು. ಆಂಜನೇಯನು ಶುದ್ಧ
ಕಪಿ. ಅದಕ್ಕೆ ಸಂಸ್ಕೃತ ಬರೋಣವೆಂದರೇನು ?
ಉ: ಸ್ವಾಮೀ ನೀವು ಆಂಜನೇಯನು ಸಮುದ್ರ ಹಾರಿದ ಕಪಿ ಎಂಬುದನ್ನು ಮರೆತುಬಿಟ್ಟಿದ್ದೀರಿ. ನಿಮ್ಮಂಥವರ ದೃಷ್ಟಿ
ಒಂದು. ಬೇರೆ ಇನ್ನೊಂದು ದೃಷ್ಟಿಯುಂಟು. ರಾಮನೂ ಹನುಮಂತನೂ ದೈವಾಂಶದಿಂದುಂಟಾದವರು. ಅವರಿಗೆ ಭಾಷೆ
ಕಲಿತುಕೊಳ್ಳಲು ಅಸಾಧ್ಯವೆ ? ಅವರಿಬ್ಬರಿಗೂ ಸಂಸ್ಕೃತ ಕನ್ನಡ ಮಾತ್ರವೇ ಅಲ್ಲ, ಹಿಂದೀ ಇಂಗ್ಲಿಷುಗಳನ್ನೂ ಕಲಿತುಕೊಳ್ಳುವ
ಶಕ್ತಿಯಿದ್ದವರು. ತಮಿಳು, ತೆಲುಗು, ಮರಾಠಿ, ಗುಜರಾತಿಗಳನ್ನೂ ಕಲಿತುಕೊಳ್ಳಬಲ್ಲವರು.
ಪ್ರ: ಹಾಗಾದರೆ ಏನು ನಿಷ್ಕರ್ಷೆ ?
ಉ: ನಿಷ್ಕರ್ಷೆ ಇಷ್ಟು: ಆವರಿಬ್ಬರೂ ತಮಗಿಬ್ಬರಿಗೂ ಬರುವ ಯಾವುದೋ ಭಾಷೆಯಲ್ಲಿ ಮಾತನಾಡಿದರು. ಇಲ್ಲಿ ನಮಗೆ ಮುಖ್ಯವಾದದ್ದು
ಅವರು ಯಾವ ಭಾಷೆಯಲ್ಲಿ ಮಾತನಾಡಿದರೆಂಬುದಲ್ಲ; ಏನನ್ನು ಮಾತನಾಡಿದರೆಂಬುದು. ಅವರು ಪರಸ್ಪರ ತಿಳಿಸಬೇಕಾಗಿದ್ದ ಸಂಗತಿ
ಯಾವುದು ? ಅದನ್ನು ಯಾವ ಮರ್ಯಾದೆಯಿಂದ, ಎಂಥ ನವುರಿನಿಂದ ತಿಳಿಸಿದರು ? – ಇದು ನಮಗೆ ಮುಖ್ಯ. ಭಾಷೆಯ ಪ್ರಶೆ ಇಲ್ಲಿ
ಸಂಪೂರ್ಣವಾಗಿ ಅಸಂಗತ.